ಅರಳುವ ಹೂವುಗಳೇ
ಅರಳುವ ಹೂವುಗಳೇ ಆಲಿಸಿರಿ,
ಬಾಳೊಂದು ಹೋರಾಟ ಮರೆಯದಿರಿ
ಬೆಳಗಿನ ಕಿರಣಗಳೇ ಬಣ್ಣಿಸಿರಿ
ಇರುಳ್ಹಿಂದೆ ಬೆಳಕುಂಟು ತೋರಿಸಿರಿ
ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ
ಗೆಲ್ಲುವ ಭರವಸೆಯೊಂದೇ ಬೆಳಕಾಗಲಿ
ಮನವೇ ಓ ಮನವೇ ನೀ ಅಳುಕದಿರು
ಮಳೆಯೋ ಬರಸಿಡಿಲೋ ನೀ ನಡೆಯುತಿರು || ಪ ||
ಮನಸೆಂಬ ಕನ್ನಡಿಯು ಒಡೆದು ಹೋಗಬಾರದು,
ಬಾಳು ಒಂದು ಗೋಳು ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲಾ? ಯಾರಿಗಿಲ್ಲಿ ಸಾವಿಲ್ಲಾ?
ಕಾಲಕಳೆದ ಹಾಗೆ ಎಲ್ಲಾ ಮಾಯವಾಗುವಂತದು
ಉಳಿಪೆಟ್ಟು ಬೀಳುವ ಕಲ್ಲೇ ಶಿಲೆಯಾಗಿ ನಿಲ್ಲುವುದು,
ದಿನ ನೋವ ನುಂಗುವ ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ? ಯಾರಿಗಿಲ್ಲ ಪರದಾಟ?
ನಮ್ಮ ಪ್ರತಿಕನಸು ಇಲ್ಲಿ ನನಸಾಗೋ ಒಳ್ಳೇ ಕಾಲವು ಮುಂದೆ ಇದೆ
ಮನವೇ ಓ ಮನವೇ ನೀ ಕುಗ್ಗದಿರು
ಬೆಟ್ಟ ಬಯಲಿರಲಿ ನೀ ನುಗ್ಗುತಿರು || 1 ||
ನೋವು ನಲಿವು ಅನ್ನೋದು ಬಾಳ ರೈಲು ಕಂಬಿಗಳು
ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ ಧ್ಯೇಯವೊಂದು ಜೊತೆಯಿರಲಿ
ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ
ನಾವೆಲ್ಲರು ಎಂದು ಒಂದೆ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ ಬದಲಾಗು
ಏನೇ ಸಾಧನೆಗೂ ನೀ ಮೊದಲಾಗು || ೨ ||